ಕುಲೋತ್ತುಂಗ ಚೋಳ

	 ಚೋಳ ರಾಜ್ಯವನ್ನಾಳಿದ ಈ ಹೆಸರಿನ ರಾಜರು ಮೂವರು. ಅವರ ಬಗ್ಗೆ ವಿವರಗಳನ್ನು ಮುಂದೆ ಕೊಡಲಾಗಿದೆ.

	ಕುಲೋತ್ತುಂಗ ಚೋಳ 1 : ವೆಂಗಿ ಚಾಳುಕ್ಯ ಮನೆತನದಲ್ಲಿ ಹುಟ್ಟಿದ ಚೋಳದೊರೆ. 1ನೆಯ ರಾಜೇಂದ್ರ ಚೋಳನ (ಆಳ್ವಿಕೆ : 1012-44) ಮಗಳಾದ ಅಮ್ಮಂಗಾ ದೇವಿ ಪೂರ್ವ ಚಾಳುಕ್ಯ ದೊರೆ 1 ನೆಯ ರಾಜರಾಜ ನರೇಂದ್ರ (ಆಳ್ವಿಕೆ : 1022-63) ಇವರ ಮಗ. ಚೋಳ ದೊರೆ ಅಧಿರಾಜೇಂದ್ರನ (1067-70) ಮರಣಾನಂತರ ಚೋಳ ಸಿಂಹಾಸನವನ್ನೇರಿ ಹೊಸ ಚಾಳುಕ್ಯ - ಚೋಳ ವಂಶವನ್ನಾರಂಭಿಸಿ 1070 ರಿಂದ 1122ರ ವರೆಗೆ ರಾಜ್ಯಭಾರ ಮಾಡಿದ. ಇವನಿಗೆ ಮೊದಲು ರಾಜೇಂದ್ರನೆಂಬ ಹೆಸರಿತ್ತು. 1067ರಲ್ಲಿ 1ನೆಯ ವೀರರಾಜೇಂದ್ರನಿಗೆ ಕಲ್ಯಾಣ ಚಾಳುಕ್ಯರ ಮೇಲೆ ಯುದ್ಧ ಹೂಡಲು ಸಹಾಯ ಮಾಡಿದ್ದ. ಇವನೊಬ್ಬ ಸಮರ್ಥನಾದ ದೊರೆ. ಆದರೆ ಇವನು ಸದಾ ಯುದ್ಧಗಳಲ್ಲಿ ನಿರತನಾಗಬೇಕಾಗಿತ್ತು. ಚೋಳದ ಆಧಿಪತ್ಯದಲ್ಲಿದ್ದ ಸಿಂಹಳ 1075ರಲ್ಲಿ ಸ್ವತಂತ್ರವಾಯಿತು. ಕಲ್ಯಾಣ ಚಾಳುಕ್ಯ ದೊರೆಯಾಗಿದ್ದ 6ನೆಯ ವಿಕ್ರಮಾದಿತ್ಯ ಮರುವರ್ಷ ಕುಲೋತ್ತುಂಗನ ಮೇಲೆ ಯುದ್ಧ ಹೂಡಿದ. ಈತ ಸಿಂಹಳದ ದೊರೆಯೊಂದಿಗೆ ಮೈತ್ರಿಯ ಒಪ್ಪಂದ ಮಾಡಿಕೊಂಡ. ಪಾಂಡ್ಯ ಮತ್ತು ಚೇರರ ಮೇಲೆ ಯುದ್ಧ ಮಾಡಿ ಅವನನ್ನು ಸೋಲಿಸಿದ. 1096-98ರಲ್ಲಿ ಕುಲೋತ್ತುಂಗ ಕಳಿಂಗರಾಜ್ಯದ ಮೇಲೆ ದಂಡೆತ್ತಿ ಹೋಗಿ ಅಲ್ಲಿ ಚೋಳ ರಾಜ್ಯದ ಗಡಿಗಳನ್ನು ಭದ್ರಪಡಿಸಿದ. ಆದರೆ 1117ರಲ್ಲಿ ಹೊಯ್ಸಳ ವಿಷ್ಣುವರ್ಧನನಿಗೆ ಗಂಗವಾಡಿ ವಶವಾಯಿತು. ಮರುವರ್ಷವೇ ಚಾಳುಕ್ಯ 6ನೆಯ ವಿಕ್ರಮಾದಿತ್ಯ ವೆಂಗಿಯನ್ನು ಗೆದ್ದುಕೊಂಡ. ಹೀಗಾಗಿ, ಸಿಂಹಳ, ಗಂಗವಾಡಿ ಮತ್ತು ವೆಂಗಿ ರಾಜ್ಯಗಳನ್ನು ಕುಲೋತ್ತುಂಗ ಕಳೆದುಕೊಳ್ಳಬೇಕಾಯಿತು. ಇಷ್ಟಾದರೂ ಕುಲೋತ್ತುಂಗನ ರಾಜ್ಯಭಾರ ಶಾಂತಿಯುತವಾಗಿತ್ತು. ಇವನ ಕಾಲದಲ್ಲಿ ಕಂಚಿ ವಿಶೇಷವಾಗಿ ಅಭಿವೃದ್ಧಿ ಹೊಂದಿತು.

	ಕುಲೋತ್ತುಂಗ ಚೋಳ 2 : ವಿಕ್ರಮ ಚೋಳ ಮರಣಾನಂತರ 1133 ರಿಂದ 1150ರ ವರೆಗೆ ಆಳಿದ ಚಕ್ರವರ್ತಿ. ಇವನ ಆಳ್ವಿಕೆಯಲ್ಲಿ ಗಮನಾರ್ಹವಾದ ರಾಜಕೀಯ ಘಟನೆಗಳಾವುವೂ ಸಂಭವಿಸಲಿಲ್ಲ. ಈತ ಶೈವಭಕ್ತನಾಗಿದ್ದು ಚಿದಂಬರ ದೇವಾಲಯಕ್ಕೆ ಅಪರಿಮಿತ ದತ್ತಿಗಳನ್ನು ಬಿಟ್ಟ. ಇವನು ವೈಷ್ಣವ ಮತವನ್ನು ಸಹಿಸದೆ ಚಿದಂಬರದಲ್ಲಿದ್ದ ಗೋವಿಂದರಾಜದೇವರ ವಿಗ್ರಹವನ್ನು ಸಮುದ್ರಕ್ಕೆ ಎಸೆಯುವಂತೆ ಆಜ್ಞೆಮಾಡಿದನೆಂದು ಪ್ರತೀತಿಯುಂಟು. ಈತ ಕಂಬನ್, ಒಟ್ಟ ಕುಟ್ಟಾನ್ ಮತ್ತು ಸೆಕ್ಕಿವಾರ್ ಮುಂತಾದ ತಮಿಳು ಕವಿಗಳಿಗೆ ಆಶ್ರಯ ನೀಡಿದ.

    ಕುಲೋತ್ತುಂಗ ಚೋಳ 3 : 2ನೆಯ ರಾಜಾಧಿರಾಜನ ಅನಂತರದ ಚೋಳ ಚಕ್ರವರ್ತಿ. 1178 ರಿಂದ 1218ರ ವರೆಗೆ ಆಳಿದ. ಈ 1182ರಲ್ಲಿ ಪಾಂಡ್ಯವಂಶದ ವೀರಪಾಂಡ್ಯನನ್ನು ಸೋಲಿಸಿ, ವಿಕ್ರಮ ಪಾಂಡ್ಯನನ್ನು ಆ ಸಿಂಹಾಸನದಲ್ಲಿ ಕುಳ್ಳಿರಿಸಿದರೂ ಆತ ಅವಿಧೇಯನಾಗಿದ್ದನೆಂದು ಅವನನ್ನು 1189 ರಲ್ಲಿ ಪದಚ್ಯುತಿಗೊಳಿಸಿದ. ಈತ ಕೊಂಗು ರಾಜ್ಯವನ್ನು ವಶಮಾಡಿಕೊಂಡದ್ದಲ್ಲದೆ ನೆಲ್ಲೂರಿನ ತೆಲುಗು-ಚೋಳರಿಂದ ಕಂಚಿಯನ್ನು ಕಿತ್ತುಕೊಂಡ. 1205ರಲ್ಲಿ ಪಾಂಡ್ಯರೊಡನೆ ಮಾಡಿದ ಯುದ್ಧದಲ್ಲಿ ಇವನಿಗೆ ಜಯ ಲಭಿಸಿತು. ಆದರೆ ಕೊನೆಗೆ ಈತ ಮಾರವರ್ಮ ಸುಂದರಪಾಂಡ್ಯನಿಂದ ಸೋಲನ್ನನುಭವಿಸಬೇಕಾಯಿತು. ಈತನ ಕಾಲದಲ್ಲಿ ಪದೇ ಪದೇ ಸಂಭವಿಸಿದ ಯುದ್ಧಗಳಿಂದಾಗಿ ರಾಜ್ಯದಲ್ಲಿ ಕ್ಷಾಮ ತಲೆದೋರಿತು. ಈತ ಕ್ಷಾಮಪರಿಹಾರ ಕಾರ್ಯವನ್ನು ಯಶಸ್ವಿಯಾಗಿ ಕೈಕೊಂಡ. ಇವನ ಕಾಲದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ವಿಶೇಷ ಪ್ರೋತ್ಸಾಹ ದೊರಕಿತು. ಈತ ಚೋಳವಂಶದ ಕೊನೆಯ ದೊರೆಗಳ ಪೈಕಿ ಅತ್ಯಂತ ಸಮರ್ಥ.											
(ಎಂ.ಎಸ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ